ವ್ಯಾಟಿಕನ್ ನಗರ
 	ಇಟಲಿ ದೇಶದ ರಾಜಧಾನಿಯಾದ ರೋಮ್‍ನ ಒಡಲೊಳಗಿರುವ ಒಂದು ಚಿಕ್ಕ ರಾಷ್ಟ್ರ. ಕ್ರೈಸ್ತ ಕೆಥೊಲಿಕ್ ಸಾಮ್ರಾಜ್ಯದ ಈ ಪುಟ್ಟ ಸ್ವತಂತ್ರ ದೇಶದ ವಿಸ್ತೀರ್ಣ 44 ಹೆ. ಜನಸಂಖ್ಯೆ: 1,000. ಕ್ರೈಸ್ತ ಜಗದ್ಗುರುಗಳಿರುವ (ಪೋಪ್) ಈ ನಗರ ಪ್ರಪಂಚದ ಅತಿ ಚಿಕ್ಕ ರಾಷ್ಟ್ರವಾಗಿದೆ.

	ಇದು ಕೆಥೊಲಿಕ್ ಕ್ರೈಸ್ತ ಗುರುಗಳ ಪ್ರಧಾನ ಮಠ ಹಾಗೂ ಕ್ರೈಸ್ತಧರ್ಮದ ಕೇಂದ್ರಾಡಳಿತ ನಗರ. ಈ ನಗರ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಹು ಅಮೂಲ್ಯ ತೈಲಚಿತ್ರ ಹಾಗೂ ಕಲಾ ಪ್ರೌಢಿಮೆಯ ಭಂಡಾರವಾಗಿದೆ. ಪ್ರಪಂಚದ ಅತ್ಯುನ್ನತ ಹಾಗೂ ಶ್ರೇಷ್ಠ ಚಿತ್ರಕಲಾ ಕಾರರಾದ ರಾಫೆಲ್, ಲಿಯೊನಾರ್ಡೋ ಡ ವಿಂಚಿ ಮತ್ತು ಮೈಕೆಲಂಜೆಲೋ ಬಿಡಿಸಿರುವ ಪ್ರಪಂಚ ವಿಖ್ಯಾತ ಚಿತ್ರಗಳು ಈ ನಗರದ ಚರ್ಚುಗಳಲ್ಲಿ ಹಾಗೂ ಪ್ರಮುಖ ಕಟ್ಟಡದ ಗೋಡೆಗಳನ್ನು ಅಲಂಕರಿಸಿವೆ. ಈ ನಗರದಲ್ಲಿ ಪ್ರಪಂಚದ ಬೃಹತ್ ಹಾಗೂ ಅಪೂರ್ವ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಗ್ರಂಥಾಲಯವಿದೆ.

	ಈ ನಗರ ಇಟಲಿಯ ರೋಮ್ ಪ್ರಾಂತದ ವಾಯವ್ಯ ದಿಕ್ಕಿನಲ್ಲಿ ವ್ಯಾಟಿಕನ್ ಬೆಟ್ಟದ ಪರಿಸರದ ಟೈಬರ್ ನದಿಯ ಪಶ್ಚಿಮ ದಂಡೆಯ ಮೇಲಿದೆ. ಈ ನಗರದ ಅಧಿಕೃತ ಹೆಸರು ವ್ಯಾಟಿಕನ್ ನಗರ ರಾಜ್ಯ. 1929ರ ಲ್ಯಾಟರನ್ ಒಪ್ಪಂದದ ಮೇರೆಗೆ ಈ ನಗರ ಇಟಲಿ ದೇಶದಿಂದ ಬೇರ್ಪಟ್ಟು ಸ್ವತಂತ್ರವಾಯಿತು. ಪೋಪ್ ಈ ದೇಶದ ಸರ್ವಶ್ರೇಷ್ಠ ಆಡಳಿತಾಧಿಕಾರಿ.

	ಪೋಪ್ ಗುರುಗಳು ಸರ್ಕಾರದ ಉನ್ನತ ಅಧಿಕಾರಿಯಾಗಿದ್ದರೂ ತಮ್ಮ ಹೆಚ್ಚಿನ ಸಮಯವನ್ನು ಧಾರ್ಮಿಕ ಕಾರ್ಯಗಳಿಗೆ ಮೀಸಲಾಗಿಟ್ಟಿದ್ದು ಆಡಳಿತ ಕಾರ್ಯಗಳನ್ನು ನಿರ್ವಹಿಸಲು ಬೇರೆ ಬೇರೆ ಅಧಿಕಾರಿಗಳನ್ನು ನಿಯಮಿಸಿರುತ್ತಾರೆ. ಈ ನಗರದ ಒಳಾಡಳಿತವನ್ನು ರಾಜ್ಯಪಾಲರು ನಿರ್ವಹಿಸುತ್ತಾರೆ. ಕಾರ್ಡಿನಲ್ ಸೆಕ್ರೆಟರಿ ಆಫ್ ಸ್ಟೇಟ್ ಅಂತರ ರಾಜ್ಯ ಮತ್ತು ವ್ಯಾಟಿಕನ್ ದೇಶದ ಕಾರ್ಯದರ್ಶಿ. ಈ ನಗರದಲ್ಲಿ ಸಾಮಾನ್ಯ ಮತ್ತು ಧಾರ್ಮಿಕ ಎಂಬ ಎರಡು ನ್ಯಾಯಾಲಯಗಳಿವೆ. ಕ್ರಿಮಿನಲ್ ವಿಚಾರಣೆಯನ್ನು ಇಟಲಿ ದೇಶದ ಸರ್ಕಾರಿ ನ್ಯಾಯಾಲಯ ನಡೆಸುತ್ತದೆ. ಪೋಪ್ ಗುರುಗಳ ಧಾರ್ಮಿಕ ಆಚರಣಾ ವಿಧಿಗಳು ಕ್ರಮಬದ್ಧವಾಗಿ ನಡೆಯುವಂತೆ ಮಾಸ್ಟರ್ ಆಫ್ ಪಾಪಲ್ ಸೆರೆಮನಿಸ್ ವ್ಯವಸ್ಥೆ ಮಾಡುತ್ತದೆ. ಪೋಪ್‍ರ ಜೊತೆಗಿನ ಜನ ಸಂದರ್ಶನ ಮತ್ತು ಪ್ರಪಂಚದ ನಾನಾ ರಾಷ್ಟ್ರಗಳಿಂದ ಬರುವ ಗಣ್ಯ ವ್ಯಕ್ತಿಗಳ ಭೇಟಿ ಹಾಗೂ ಪತ್ರವ್ಯವಹಾರದ ವ್ಯವಸ್ಥೆಯನ್ನು ಪಾಪಲ್ ಹೌಸ್ ಹೋಲ್ಡ್ ನೋಡಿಕೊಳ್ಳುತ್ತದೆ. ಹಣಕಾಸು ವ್ಯವಸ್ಥೆಯನ್ನು ಆಯಾ ವಿಭಾಗಗಳ ಅಧಿಕಾರಿಗಳಿಗೆ ವಹಿಸಲಾಗಿದೆ. ವ್ಯಾಟಿಕನ್ ನಗರಕ್ಕೆ ತನ್ನದೇ ನಾಣ್ಯ, ಅಂಚೆ ಮತ್ತು ದೂರಸಂಪರ್ಕ ವ್ಯವಸ್ಥೆಯಿದೆ. ಜಲಮಂಡಲಿ, ನಗರಪಾಲಿಕೆ, ಬ್ಯಾಂಕಿಂಗ್, ಮುದ್ರಣಾಲಯ, ರೈಲು ನಿಲ್ದಾಣ ಹಾಗೂ ಇತರೆ ಸೌಕರ್ಯಗಳನ್ನು ಹೊಂದಿದೆ. ಈ ಸ್ವತಂತ್ರ ದೇಶದ ಮತ್ತೊಂದು ವೈಶಿಷ್ಟ್ಯವೆಂದರೆ ಭೂರಕ್ಷಣಾದಳ, ವಾಯುದಳ ಮತ್ತು ನೌಕಾದಳ ಇಲ್ಲದಿರುವುದು. ಪೋಪರ ರಕ್ಷಣೆ ಹಾಗೂ ನಿವಾಸದ ಸುರಕ್ಷತೆಯನ್ನು ಸ್ವಿಸ್ ಕಾವಲುದಳ ನೋಡಿಕೊಳ್ಳುತ್ತದೆ. ನಗರದ ರಕ್ಷಣೆಯನ್ನು ಹಾಗೂ ವಿಷಯ ಸಂಗ್ರಹಣೆಯನ್ನು ಕೇಂದ್ರ ಕಚೇರಿಯ ಜಾಗೃತ ದಳದವರು ನೋಡಿಕೊಳ್ಳುತ್ತಾರೆ. ಸಂತ ಪೀಟರ್ ಮತ್ತು ಸಂತ ಪಾಲ್ ಎಂಬ ಎರಡು ಸ್ವಯಂ ಸೇವಾ ಸಂಸ್ಥೆಗಳು ಪ್ರತಿದಿನ ನಗರದಲ್ಲಿ ಪೊಲೀಸ್ ಕಾರ್ಯವನ್ನು ನಿರ್ವಹಿಸುತ್ತವೆ.

	ಚರ್ಚಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸುವ ಲ ಒಸ್ಸರ್‍ವ್ಯಟೋರ್ ರೊಮಾನೊ ಪ್ರಪಂಚದ ಬಹು ಪ್ರಭಾವೀ ಪ್ರಸಿದ್ಧ ದಿನಪತ್ರಿಕೆ, ಒಸ್ಸರ್‍ವ್ಯಟೋರ್ ಡೆಲ್ಲಾ ಡೊಮೆನಿಕಾ ವಾರಪತ್ರಿಕೆ ಮತ್ತು ಆಕ್ಟಾ ಅಪೊಸ್ತೊಲಿಕಾ ಸೆಡಿಸ್ ಎಂಬ ಪತ್ರಿಕೆಗಳು ಇಲ್ಲಿ ಪ್ರಕಟಗೊಳ್ಳುತ್ತವೆ. ಇಲ್ಲಿ ಒಂದು ಆಕಾಶವಾಣಿ ಕೇಂದ್ರವಿದ್ದು ಇಲ್ಲಿಂದ ಲ್ಯಾಟಿನ್ ಭಾಷೆಯೂ ಸೇರಿದಂತೆ 30 ಭಾಷೆಗಳಲ್ಲಿ ಸುದ್ದಿ ಸಮಾಚಾರಗಳನ್ನೂ ಕ್ರೈಸ್ತಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನೂ ಪ್ರಸಾರ ಮಾಡಲಾಗುತ್ತದೆ.

	ಇತಿಹಾಸ: ಪ್ರಾಚೀನ ಯುರೋಪ್ ಖಂಡ ರೋಮನ್ ಸಾಮ್ರಾಜ್ಯದ ಆಡಳಿತಕ್ಕೆ ಸೇರಿತ್ತು. ವ್ಯಾಟಿಕನ್ ಬೆಟ್ಟ ಅಂದಿನ ರೋಮಿನ ರಾಜನಾಗಿದ್ದ ನೀರೋ ದೊರೆಯ ಉದ್ಯಾನವನವಾಗಿತ್ತೆನ್ನುವರು. ಈ ಬೆಟ್ಟದ ಮೇಲೆ ಸಂತ ಪೀಟರ್ ಎಂಬ ಯೇಸುಕ್ರಿಸ್ತನ ಅನುಯಾಯಿಯನ್ನು ಶಿಲುಬೆಗೇರಿಸಲಾಗಿತ್ತು. ಆತನ ಒಂದು ಸುಂದರ ಸಮಾಧಿ ಇಲ್ಲಿದೆ. ಆ ಸಂತನ ಸ್ಮರಣಾರ್ಥ ಇದನ್ನು 100ರಲ್ಲಿ ನಿರ್ಮಿಸಲಾಯಿತು.

	300ರಲ್ಲಿ ಕಾನ್‍ಸ್ಟಾಂಟೀನ್ ದಿ ಗ್ರೇಟ್ ಎಂಬ ರೋಮನ್ ಚಕ್ರಾಧಿಪತಿ, ಸಂತ ಪೀಟರ್‍ನ ಹೆಸರಿನಲ್ಲಿ ಚರ್ಚೊಂದನ್ನು ಸಮಾಧಿಯ ಸನಿಹ ಕಟ್ಟಿಸಿದ. ಅನಂತರದ ದಿನಗಳಲ್ಲಿ ವ್ಯಾಟಿಕನ್ ಅರಮನೆ ಮತ್ತು ಅನೇಕ ಇತರೆ ಕಟ್ಟಡಗಳನ್ನು ಚರ್ಚ್‍ನ ಸುತ್ತುಮುತ್ತಲೂ ನಿರ್ಮಿಸಲಾಯಿತು.

	ಪೋಪರು ವಾಸ ಮಾಡುತ್ತಿದ್ದ ಲ್ಯಾಟರನ್ ಅರಮನೆ ರೋಮ್ ನಗರದಲ್ಲಿತ್ತು. 1309-76ರ ವರೆಗೂ ಪೋಪರು ಫ್ರಾನ್ಸ್ ದೇಶದ ಅವಿಗ್ನಾನ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲೇ ರೋಮನ್ ನಗರದಲ್ಲಿದ್ದ ಲ್ಯಾಟರನ್ ಅರಮನೆ ಸುಟ್ಟುಹೋಯಿತು. ಈ ಕಾರಣದಿಂದಾಗಿ ಪೋಪರು ತಮ್ಮ ವಾಸಸ್ಥಳವನ್ನು ರೋಮ್‍ನಿಂದ ವ್ಯಾಟಿಕನ್ ನಗರಕ್ಕೆ ಸ್ಥಳಾಂತರಿಸಿದರು. ಸಂತಪೀಟರ್ ಚರ್ಚ್ ಪಕ್ಕದಲ್ಲಿಯೇ ಲ್ಯಾಟರನ್ ಅರಮನೆಯನ್ನು ಕಟ್ಟಲಾಯಿತು. 1500ರ ಪ್ರಾರಂಭದಲ್ಲಿ ಸಂತಪೀಟರ್‍ನ ಇಗರ್ಜಿಯನ್ನು ಹೊಸ ಮಾದರಿಯಲ್ಲಿ ನವೀಕರಿಸಲಾಯಿತು. ವ್ಯಾಟಿಕನ್ ನಗರ ಪ್ರಾಚೀನ ಕಟ್ಟಡಗಳಿಂದ ಮತ್ತು ಸುಂದರ, ಶಾಂತ ರಸ್ತೆಗಳಿಂದ ಕೂಡಿದೆ. ಲ್ಯಾಟರನ್ ಅರಮನೆ ಈ ನಗರದ ಅರ್ಧ ಸ್ಥಳವನ್ನು ಒಳಗೊಂಡಿದೆ. ಈ ಅರಮನೆಯಲ್ಲಿ ಸುಸಜ್ಜಿತ ಸಾವಿರಕ್ಕೂ ಹೆಚ್ಚು ಕೊಠಡಿಗಳಿವೆ. ಜೊತೆಗೆ ವಸ್ತುಸಂಗ್ರಹಾಲಯ, ಬಯಲು ನ್ಯಾಯ ವಿಚಾರಣಾ ಸಭಾಭವನ, ಪ್ರಾರ್ಥನಾ ಮಂದಿರ, ಆಡಳಿತ ಕಚೇರಿಗಳು, ಗ್ರಂಥಾಲಯ, ಅತಿಥಿ ಗೃಹಗಳು ಮುಂತಾದವುಗಳಿವೆ.						
(ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ